Wednesday, 8 January 2020

ಒಲಿದಂತೆ ಬದುಕುವಾ

*ಒಲಿದಂತೆ ಬದುಕುವಾ...*

ಅಳುವ ಕಡಲೊಳೂ ತೇಲಿ ಬರುತಲಿದೆ /

ನಗೆಯ ಹಾಯಿ ದೋಣಿ; ಬಾಳ ಗಂಗೆಯ ಮಹಾಪೂರದೊಳೂ/

ಸಾವಿನೊಂದು ವೇಣಿ  (ಎಂ ಗೋಪಾಲಕೃಷ್ಣ ಅಡಿಗ)

ಅರ್ಜುನನ ಮೊಮ್ಮಗ, ಅಭಿಮನ್ಯು-ಉತ್ತರೆಯರ ಮಗ ಪರೀಕ್ಷಿತ ಮಹಾರಾಜ ಒಮ್ಮೆ ಬೇಟೆಯಾಡಲು ಅಡವಿಗೆ ತೆರಳಿದ್ದ. ಅನೇಕ ಮೃಗಪಕ್ಷಿಗಳನ್ನು ಬೇಟೆಯಾಡಿ ದರೂ ರಾಜನಿಗೆ ಸಮಾಧಾನವಿಲ್ಲ. ಕಾರಣ ಒಂದು ಜಿಂಕೆ ರಾಜನ ಬಾಣದ ಗುರಿಗೆ ಸಿಲುಕದೆ ಸತಾಯಿಸುತ್ತಿತ್ತು. ಜಿಂಕೆಯನ್ನೇ ಬೆನ್ನಟ್ಟುತ್ತ ರಾಜ ತನ್ನ ಗುಂಪನ್ನು ಬಿಟ್ಟು ದೂರದೂರ ಸಾಗಿದ. ಅಸಹನೆ ಕಾಡಿತು, ಶಬ್ಧವೇದಿ ವಿದ್ಯೆ ಬಲ್ಲ ಅರ್ಜುನನ ಮೊಮ್ಮಗನಾದ ನನಗೆ ಒಂದು ಜಿಂಕೆಯನ್ನೂ ಕೊಲ್ಲಲಾಗದಿದ್ದರೆ ಎಂಥ ಅವಮಾನ ಎಂಬ ಹತಾಶೆ ಮನವನ್ನು ಚುಚ್ಚಲಾರಂಭಿಸಿತು. ಆಗ ಕಾಣಿಸಿದ್ದು ಒಂದು ಋಷ್ಯಾಶ್ರಮ. ಅಲ್ಲಿಗೆ ತೆರಳಿದ ಪರೀಕ್ಷಿತ, ‘ಜಿಂಕೆ ಆಶ್ರಮದ ದಿಕ್ಕಿನಲ್ಲೇ ಓಡಿಬಂತು. ನೀವು ಕಂಡಿರಾ’ ಎಂದು ವಿಚಾರಿಸಿದ. ದುರದೃಷ್ಟ, ಆಶ್ರಮದಲ್ಲಿ ಧ್ಯಾನಸ್ಥರಾಗಿದ್ದ ಶಮೀಕ ಮಹರ್ಷಿ ಮೌನವ್ರತದಲ್ಲಿದ್ದರು. ಹಾಗಾಗಿ ಅವರು ಮೌನ, ಧ್ಯಾನ ಮುರಿಯಲಿಲ್ಲ. ಪರೀಕ್ಷಿತನಿಗೋ ಅಸಹನೆ, ನಾಲ್ಕೈದುಬಾರಿ ಕೇಳಿದರೂ ಮುನಿ ಉತ್ತರಿಸಲಿಲ್ಲ, ತನ್ನನ್ನು ಉಪಚರಿಸಲಿಲ್ಲ ಎಂದು ಮತ್ತಷ್ಟು ವ್ಯಗ್ರನಾದ. ಅಲ್ಲಿಯೇ ಹತ್ತಿರ ಬಿದ್ದಿದ್ದ ಸತ್ತ ಹಾವಿನ ಕಳೆಬರವನ್ನು ಮುನಿಯ ಕೊರಳಿಗೆ ಹಾಕಿ ಸಿಡುಕಿನಿಂದ ಹೊರಟುಹೋದ.

ಅದಾದ ಕೆಲಹೊತ್ತಿನಲ್ಲೇ ಆಶ್ರಮಕ್ಕೆ ಬಂದ ಶಮೀಕ ಮುನಿಯ ಪುತ್ರ ಶೃಂಗಿ, ತಂದೆ ಕೊರಳಲ್ಲಿದ್ದ ಸತ್ತ ಹಾವನ್ನು ಕಂಡು ಕೆಂಡಾಮಂಡಲವಾದ. ‘ಇಂಥ ಅಕಾರ್ಯ ಮಾಡಿದವನು ವಾರದೊಪ್ಪತ್ತಿನೊಳಗೆ ಹಾವು ಕಚ್ಚಿ ಸಾಯಲಿ’ ಎಂದು ಶಪಿಸಿಯೇ ಬಿಟ್ಟ. ರಾಜನಿಗೆ ವಿಚಾರ ತಿಳಿಯಿತು. ಛೇ ಎಂಥ ಅಪಚಾರ ಎಸಗಿ ಶಾಪಕ್ಕೆ ಗುರಿಯಾದೆ ಎಂದು ನೊಂದುಕೊಂಡ. ಇತ್ತ ರಾಜನನ್ನು ಹೇಗಾದರೂ ಬದುಕಿಸಲೇಬೇಕು, ಶಾಪ ಫಲಿಸಬಾರದು ಎಂದು ಪಣತೊಟ್ಟ ಮಂತ್ರಿಗಳು ದೊಡ್ಡ ಸ್ತಂಭವೊಂದರ ಮೇಲೆ ಅರಮನೆ ಕಟ್ಟಿ ಅದರೊಳಗೆ ರಾಜನನ್ನು ಬಚ್ಚಿಟ್ಟರು. ಅರಮನೆಯೊಳಗೆ ಅಪ್ಪಣೆಯಿಲ್ಲದೆ ಮನುಷ್ಯರಿರಲಿ, ಯಾವ ಪ್ರಾಣಿಯೂ ಹೋಗದಂತೆ ಕಾವಲು ಕಾದರು. ಆದರೆ, ಶಾಪ ಫಲಿಸಲೇಬೇಕಿತ್ತು. ಸರ್ಪರಾಜ ತಕ್ಷಕ ಪರೀಕ್ಷಿತನನ್ನು ಬಲಿಪಡೆಯಲು ಕಾಯುತ್ತಿದ್ದ. ತನ್ನ ಮೂಲಸ್ವರೂಪದಲ್ಲಿ ರಾಜನನ್ನು ತಲುಪುವುದು ಅಸಾಧ್ಯ ಎಂದು ಖಚಿತವಾದಾಗ ಅರಮನೆ ಸೇವಕರು ಒಯ್ಯುತ್ತಿದ್ದ ಹಣ್ಣಿನ ಬುಟ್ಟಿಯಲ್ಲಿ ಕ್ರಿಮಿಯ ರೂಪದಲ್ಲಿ ಸೇರಿಕೊಂಡು ಹಣ್ಣೊಂದನ್ನು ಕಚ್ಚಿದ. ದುರ್ದೈವವಶಾತ್ ಪರೀಕ್ಷಿತನೂ ಅದೇ ಹಣ್ಣು ತಿನ್ನಲು ಎತ್ತಿಕೊಂಡಾಗ ಕ್ರಿಮಿರೂಪದ ತಕ್ಷಕ ಮೂಲರೂಪ ತಾಳಿ ಕಚ್ಚಿದ. ಅಲ್ಲಿಗೆ ಶೃಂಗಿಯ ಶಾಪ ಫಲಿಸಿತ್ತು.

ಈ ಗಾಳಿಯ ಬೆನ್ನ ಮೇಲೆ/ ಮೂರ್ತಿಯೊಂದ ಕೆತ್ತಬೇಕು ಅದಕೆ ಎಲ್ಲ ಸಾಧನ/

ಈ ದೇಹಾ ಈ ವಿದ್ಯಾ/ ಜನನ ಮರಣ ವೇದನಾ (ವಿ.ಜಿ. ಭಟ್ಟ)

ವಿಧಿಯ ವಿರುದ್ಧ ಹೋಗಿ ಗೆದ್ದವರು ಯಾರೂ ಇಲ್ಲ. ಮನುಷ್ಯ ಸಂಕಲ್ಪ ಎಷ್ಟೇ ದೊಡ್ಡದಿದ್ದರೂ, ಅದಕ್ಕೂ ಮಿಗಿಲಾದದ್ದು ದೈವನಿಯಮ. ಒಳಿತಾದಾಗ ನನ್ನಿಂದಲೇ ಎಂದು ಬೀಗುವುದು, ಕೆಡುಕು ಘಟಿಸಿದಾಗ ಅನ್ಯರನ್ನು ದೂರುವುದು ಮನುಷ್ಯ ಸ್ವಭಾವ. ಮಹಾಭಾರತ ಯುದ್ಧ ನಡೆದ ಮೇಲೂ ‘ಇಷ್ಟೆಲ್ಲ ಸಾವು-ನೋವುಗಳಿಗೆ ನಾನೇ ಕಾರಣ. ನನ್ನ ರಾಜ್ಯದಾಸೆಯಿಂದ ಸ್ಮಶಾನಸದೃಶ ಭೂಪ್ರದೇಶವನ್ನು ಆಳುವಂತಾಯಿತು’ ಎಂದು ಯುಧಿಷ್ಠಿರ ನೊಂದುಕೊಂಡಿದ್ದ. ಆಗ ಭೀಷ್ಮ ಪಿತಾಮಹ ಕಥೆಯೊಂದನ್ನು ಉದಾಹರಿಸುವ ಮೂಲಕ ಧರ್ಮರಾಯನ ವ್ಯಾಕುಲತೆಯನ್ನು ಪರಿಹರಿಸುತ್ತಾರೆ. ಅರಣ್ಯದಲ್ಲಿ ತಪೋನಿಷ್ಠೆಯಿಂದ ಸಾತ್ವಿಕ ಜೀವನ ನಡೆಸುತ್ತಿದ್ದ ಗೌತಮಿಯ 6 ವರ್ಷದ ಪುತ್ರ ಹಾವು ಕಚ್ಚಿ ಸತ್ತುಹೋಗುತ್ತಾನೆ. ಕಾಡಿನಲ್ಲಿ ಆ ಹಾವನ್ನು ಹಿಡಿಯುವ ವ್ಯಾಧನೊಬ್ಬ ‘ಅಮಾಯಕ ಬಾಲಕನನ್ನು ಕಚ್ಚಿಕೊಂಡ ಈ ಸರ್ಪ ವಧೆಗೆ ಅರ್ಹ, ಸಾಯಿಸಲು ಅನುಮತಿ ಕೊಡು’ ಎಂದು ಗೌತಮಿ ಬಳಿ ಕೇಳುತ್ತಾನೆ. ‘ನನ್ನ ಮಗನ ಹಣೆಯಲ್ಲಿ ಹಾವು ಕಚ್ಚಿ ಸಾಯುವುದು ಬರೆದಿದ್ದರೆ, ಅದಕ್ಕೆ ಸೇಡು ತೀರಿಸಿಕೊಳ್ಳಲು ನನಗೆ ಯಾವ ಅಧಿಕಾರವಿದೆ? ಅಷ್ಟಕ್ಕೂ ದಂಡನೆ ವಿಧಿಸುವುದು ರಾಜನಿಗಿರುವ ಅಧಿಕಾರ’ ಎಂದು ಗೌತಮಿ ಮರುನುಡಿಯುತ್ತಾಳೆ. ‘ಆ ಬಾಲಕನ ವಿಧಿಯಲ್ಲಿ ಅಂಥ ಸಾವೇ ಬರೆದಿತ್ತು. ನಾನು ನಿಮಿತ್ತ ಮಾತ್ರ, ನಾನು ಕಚ್ಚದೇ ಹೋಗಿದ್ದರೂ, ಬೇರೊಂದು ಹಾವು ಕಚ್ಚಿ ಬಾಲಕ ಸಾಯುತ್ತಿದ್ದ, ನನ್ನನ್ನು ಕೊಲ್ಲಬೇಡ ಬಿಟ್ಟುಬಿಡು’ ಎಂದು ಆ ಸರ್ಪವೂ ವಾದಿಸುತ್ತದೆ. ಈ ಜಿಜ್ಞಾಸೆಯಲ್ಲಿ ಯಾರು ಸರಿ, ಯಾರು ತಪ್ಪು ಎಂದು ನಿಷ್ಕರ್ಶಿಸಲು ಸ್ವತಃ ಯಮಧರ್ಮನಿಗೂ ಸಾಧ್ಯವಾಗುವುದಿಲ್ಲ. ಮಹಾಭಾರತ ಯುದ್ಧದ ಸಾವು-ನೋವುಗಳಿಗೂ ಯá-ಧಿಷ್ಠಿರ ನಿಮಿತ್ತನೇ ಹೊರತು ನೇರ ಹೊಣೆಯಲ್ಲ ಎಂದು ಭೀಷ್ಮರು ಈ ರೀತಿ ವಿಶ್ಲೇಷಿಸುತ್ತಾರೆ.

ನೀನೇನು ತುಳಿದೆಯೋ, ಏನೇನು ಬೆಳೆದೆಯೋ/ ಏನೆಲ್ಲ ಕೂಡಿಸಿ ಕೂಡಿಸಿ ಕಳೆದೆಯೊ

ಯಾರು ಎಲ್ಲ ಲೆಕ್ಕವ ಬರೆದು ಇಟ್ಟವರು?

ಏನಯ್ಯ, ಕಾಲಪುರುಷ / ನಿನ್ನ ಮುಖದರುಶನವ ನೊಮ್ಮೆ ದಯಪಾಲಿಸಯ್ಯ (ಚನ್ನವೀರ ಕಣವಿ)

ಜೀವನದ ಹಾದಿಯಲ್ಲಿ ಗೊಂದಲಗಳು ಸಾವಿರ. ಯಾವುದು ಸರಿ? ಯಾವುದು ತಪ್ಪು? ಇತ್ಯಾದಿ ಪ್ರಶ್ನೆಗಳು ನಿರಂತರ. ಅನೇಕ ಬಾರಿ ನಮ್ಮ ಸಹಜ ಪ್ರವೃತ್ತಿ ಬೇರೆ ಯವರ ದೃಷ್ಟಿಯಲ್ಲಿ ವಿಪರೀತವಾಗಿರುತ್ತದೆ. ಜಗತ್ತಿನ ಸೃಷ್ಟಿಯಲ್ಲಿ ನೋಡುವವರ ದೃಷ್ಟಿಗೆ ಅನುಗುಣವಾಗಿ ಎಲ್ಲವೂ ವಿಭಿನ್ನ, ವಿಶಿಷ್ಟ.

ಮೇಲೊಂದು ಗರುಡ ಹಾರುತಿಹುದು / ಕೆಳಗದರ ನೆರಳು ಓಡುತಿಹುದು

ಅದಕೊ ಅದರಿಚ್ಛೆ ಹಾದಿ / ಇದಕು ಹರಿದತ್ತ ಬೀದಿ (ಪುತಿನ)

ಬದುಕೆಂದರೆ ಹಾಗೆ. ಲೌಕಿಕ ಜಗತ್ತಿನಲ್ಲಿ ಎಲ್ಲವನ್ನೂ ಚಿಂತನೆ, ಆಲೋಚನೆಯಿಂದ ಯೋಜನಾಬದ್ಧವಾಗಿ ಮಾಡಬಹುದು. ಆದರೆ, ಸಾವನ್ನು ಮಾತ್ರ
ನಮ್ಮಿಚ್ಛೆಯಂತೆ ನಿರ್ಧರಿಸುವುದು ಸಾಧ್ಯವಿಲ್ಲ.

ಎನಗೊಂದು ಮಾತು ಹೇಳದೆ ಹೋದ ಹಂಸ/ ತನುವಿನೊಳಗೆ ಅನುದಿನ ವಿದ್ದು/ ಜ್ವಾಲಾಧರವೆಂಬೊ ಮಾಳಿಗೆ ಮನೆಯಲ್ಲಿ/ ಈಹೋದು ಒಂಭತ್ತು ಬಾಗಿಲ (ಪುರಂದರದಾಸರು)

ದೇಹದೊಳಗೆ ಇಷ್ಟು ಕಾಲ ವಾಸಿಸಿದ ಜೀವ, ಹೋಗುವ ಹೊತ್ತಲ್ಲಿ ಒಂದು ಮಾತು ಹೇಳಿಹೋಗಬಾರದಿತ್ತೇ ಎಂದು ದಾಸರು ಪ್ರಶ್ನಿಸುತ್ತಾರೆ. ಗಾಳಿ ಬೀಸಿ ಮರದ ಎಲೆಗಳು ಹಾರಿಹೋಗುವಾಗ ತಾಯಿ ಬೇರಿಗೆ, ಆಧರಿಸಿದ ಮರಕ್ಕೆ ಆ ಎಲೆಗಳು ಹೇಳಿಹೋಗುವುವೇ? ಕಾಲ ಬಂದಾಗ ಯಾರ ಅಪ್ಪಣೆಗೂ ಕಾಯದೆ ಹೋಗುವುದು ಜೀವದ ನಿಯಮ. ಅದೇ ವಿಧಿ ಎಂದು ದಾಸರು ಸಮರ್ಥನೆಯನ್ನೂ ಒದಗಿಸುತ್ತಾರೆ. ಹಾಗಾದರೆ, ಇರುವ ಜೀವಿತ ಕಾಲದಲ್ಲಿ ಜೀವನವನ್ನು ಸಾರ್ಥಕವಾಗಿಸಿಕೊಳ್ಳುವುದು ಹೇಗೆ? ಅದಕ್ಕೂ ಯೋಗಿಗಳ ಬಳಿ, ಸಿದ್ಧಸಾಧಕರ ಬಳಿ ಉತ್ತರವಿದೆ. ಸಿದ್ಧಪುರುಷರೊಬ್ಬರ ಮನೆಗೆ ಇಳಿಸಂಜೆ ಹೊತ್ತಿನಲ್ಲಿ ಶಿಷ್ಯನೊಬ್ಬ ಬಂದು ಬಾಗಿಲು ಬಡಿಯುತ್ತಾನೆ. ‘ಯಾರದು’ ಎಂದು ಒಳಗಿನಿಂದ ಪ್ರಶ್ನೆ ಬರುತ್ತದೆ. ‘ಗುರುಗಳೇ ನಾನು’ ಎಂದು ಶಿಷ್ಯ ನುಡಿಯುತ್ತಾನೆ. ಆದರೆ, ಎಷ್ಟು ಹೊತ್ತಾದರೂ, ಮತ್ತೆಷ್ಟು ಬಾಗಿಲು ಬಡಿದರೂ ತೆರೆಯುವುದೇ ಇಲ್ಲ.

ಬೇಸರದಿಂದ ಹಿಂದಿರುಗುವಾಗ ಮತ್ತೊಬ್ಬ ಹಿರಿಯ ಶಿಷ್ಯ ಎದುರಿಗೆ ಸಿಗುತ್ತಾನೆ. ಈತ ಬೇಸರದಿಂದ ಹೀಗಾಯಿತು ಎಂದು ಹೇಳಿಕೊಂಡಾಗ ಹಿರಿಯ ಶಿಷ್ಯ ಸಮಾಧಾನ ಮಾಡಿ ಮತ್ತೆ ಗುರುವಿನ ಮನೆಗೆ ಕರೆತರುತ್ತಾನೆ. ಈ ಬಾರಿ ಬಾಗಿಲು ಬಡಿದಾಗ ಮತ್ತೆ ಯಾರೆಂಬ ಪ್ರಶ್ನೆ ಬರುತ್ತದೆ. ಈ ಸಂದರ್ಭದಲ್ಲಿ ಹಿರಿಯ ಶಿಷ್ಯ ‘ನೀವು’ ಎಂದು ಉತ್ತರಿಸುತ್ತಾನೆ. ಕೂಡಲೇ ಬಾಗಿಲು ತೆರೆಯುತ್ತದೆ. ಅದರರ್ಥ ದೈವತ್ವಕ್ಕಿರಲಿ, ಗುರುತತ್ವಕ್ಕಿರಲಿ ಆತ್ಮ ಸಮರ್ಪಣೆ ಎಂದರೆ ನಾನೆಂಬ ಭಾವವನ್ನು ಸಂಪೂರ್ಣವಾಗಿ ಇಲ್ಲ ವಾಗಿಸಿಕೊಳ್ಳುವುದು. ಪ್ರೇಮದ ಹಾದಿಯಲ್ಲಿ ಜೋಡಿ ರಸ್ತೆ ಗಳಿರುವುದಿಲ್ಲ, ಒಂದೇ ರಸ್ತೆ. ದೇಹ ಎಷ್ಟಿದ್ದರೂ, ಆತ್ಮ ಒಂದೇ ಎಂಬ ಏಕತ್ವ ಅದು ಎಂದು ರಾಜಿಂದರ್ ಸಿಂಗ್ ವಿಶ್ಲೇಷಿಸುತ್ತಾರೆ.

ಹಾಗಿದ್ದರೆ, ದೈವ ಸಾಕ್ಷಾತ್ಕಾರ ಹೇಗೆ? ದೇವರನ್ನು ತಿಳಿಯುವುದು ಹೇಗೆ? ನಮ್ಮನ್ನು ನಾವು ಅರಿಯುವುದು ಹೇಗೆ? ಒಬ್ಬಾತ ಪ್ರತೀ ದಿನ ದೇವರಿಗೆ ಪ್ರಾರ್ಥಿಸುವ ಸಂದರ್ಭದಲ್ಲಿ, ‘ದೇವರೇ, ನನ್ನೊಂದಿಗೆ ಮಾತನಾಡು’ ಎಂದು ಮೊರೆಯಿಡುತ್ತಿದ್ದ. ಅದೊಂದು ದಿನ ಆತ ಪ್ರಾರ್ಥಿಸುವ ಸಂದರ್ಭದಲ್ಲಿ ಮರದ ಮೇಲಿದ್ದ ಪಕ್ಷಿ ಚಿಲಿಪಿಲಿಗುಟ್ಟಿ ಹಾಡುತ್ತಿತ್ತು. ಆದರೆ, ಆತ ಕೇಳಿಸಿಕೊಳ್ಳಲೇ ಇಲ್ಲ. ‘ದೇವರೇ ನನ್ನೊಂದಿಗೆ ಮಾತನಾಡು’ ಎಂದು ಬೇಡುತ್ತಲೇ ಇದ್ದ. ಆಗ ಏಕಾ ಏಕಿ ಗುಡುಗು, ಮಿಂಚುಗಳು ಆಗಸದಲ್ಲಿ ಕಾಣಿಸಿಕೊಂಡವು. ಆತ ಗಮನಿಸಲೇ ಇಲ್ಲ. ‘ದೇವರೇ ನಿನ್ನನ್ನು ನೋಡಬೇಕು, ದರ್ಶನ ನೀಡು’ ಎಂದು ಆತ ಪ್ರಾರ್ಥಿಸುತ್ತಿರುವಾಗ ಆಕಾಶದಲ್ಲಿ ನಕ್ಷತ್ರವೊಂದು ಪ್ರಜ್ವಲಿಸುತ್ತಿತ್ತು. ಆದರೆ, ಆತನ ದೃಷ್ಟಿ ಬೇರೆಲ್ಲೋ ಇತ್ತು.

ದೇಗುಲಕ್ಕೆ ಹೋಗುವಾಗ ಆತ ಮನಸ್ಸಿನಲ್ಲೇ ಪ್ರಾರ್ಥಿಸುತ್ತಿದ್ದ. ‘ದೇವರೇ ನನ್ನನ್ನು ರ್ಸ³ಸು, ನೀನು ನನ್ನೊಂದಿಗಿರುವುದು ನನಗೆ ತಿಳಿಯಬೇಕು’ ಎಂದು ಹೇಳುತ್ತಿರುವಾಗಲೇ ಚಿಟ್ಟೆಯೊಂದು ಹಾರಿಬಂದು ಆತನ ಭುಜದ ಮೇಲೆ ಕುಳಿತಿತು. ಆದರೆ, ಆತ ಭುಜ ಕೊಡವಿಕೊಂಡು ಮುಂದೆ ಸಾಗಿದ. ಎಷ್ಟು ಬೇಡಿದರೂ ದೇವರು ಪ್ರತ್ಯಕ್ಷನಾಗುತ್ತಿಲ್ಲ ಎಂಬ ಹತಾಶೆಯಿಂದ ಆತ ‘ದೇವರೇ, ನನಗೆ ಸಹಾಯ ಮಾಡು’ ಎಂದು ಮೊರೆಯಿಡುತ್ತಿದ್ದ. ಆ ದಿನವೇ ಆತನಿಗೆ ಗೆಳೆಯನಿಂದ ಪತ್ರವೊಂದು ಬಂದಿತ್ತು. ‘ದೇವರನ್ನು ಕಾಣುವುದು ಹೇಗೆ ಎಂಬುದನ್ನು ನಾನು ಕಂಡುಕೊಂಡಿದ್ದೇನೆ’ ಎಂದು ಸ್ನೇಹಿತ ಬರೆದಿದ್ದ. ಆದರೆ, ಈತ ಪತ್ರವನ್ನು ಓದದೆಯೇ ಹರಿದುಹಾಕಿದ.

‘ದೇವರೇ ಕೊನೆಯದಾಗಿ ಬೇಡುತ್ತಿದ್ದೇನೆ. ಇದೇ ಕೊನೆ. ಹೇಗಾದರೂ ನನ್ನೊಂದಿಗೆ ಸಂಭಾಷಿಸು’ ಎಂದು ಆತ ಬೇಡುತ್ತಲೇ ಇದ್ದ. ಕೊನೆಗೂ ದೇವರು ಆತನ ಕನಸಿನಲ್ಲಿ ಕಾಣಿಸಿಕೊಂಡು ಹೇಳಿದ. ‘ಮಗೂ, ಸದಾಕಾಲ ನಾನು ನಿನ್ನೊಂದಿಗೆ ಸಂಭಾಷಿಸುತ್ತಲೇ ಇದ್ದೆ. ಆದರೆ, ನೀನು ನಿರೀಕ್ಷಿಸಿದ ರೂಪದಲ್ಲಿ ನಾನು ಕಾಣಿಸಿಕೊಳ್ಳಲಿಲ್ಲ. ಹಾಗಾಗಿ ನಿನ್ನ ಅರಿವಿಗೆ ಬರಲಿಲ್ಲ’. ದೇವರು ಸದಾ ಕಾಲ ನಮ್ಮೊಂದಿಗೇ ಇರುತ್ತಾನೆ. ಆದರೆ, ನಾವು ಅರಿತುಕೊಳ್ಳಬೇಕಷ್ಟೇ

ಆವ ರೂಪದೊಳು ಬಂದರು ಸರಿಯೇ/ ಆವವೇಷದೊಳು ನಿಂದರು ಸರಿಯೇ

ನೇಸರುದಯದೊಳು ಬಹೆಯಾ ಬಾ / ತಿಂಗಳಂದದಲಿ ಬಹೆಯಾ ಬಾ

ತೆರೆದಿದೆ ಮನೆ ಓ ಬಾ ಅತಿಥಿ

(ಕುವೆಂಪು)

ತಾತ್ವಿಕ ನೆಲೆಗಟ್ಟಿನಲ್ಲಿ ಲೋಕದ, ಬದುಕಿನ ವ್ಯಾಖ್ಯಾನ ಬೇರೆ. ಆದರೆ, ಲೋಕ ರೂಢಿಯಂತೆ ಎಲ್ಲರೊಳಗೊಂದಾಗಿ ಬದುಕುವ ಸಂದರ್ಭದಲ್ಲಿ ನಮ್ಮ ಬದುಕಿನ ರೀತಿ ನಾವು ಬದುಕುವ ರೀತಿಯಿಂದಲೇ ನಿರ್ಧಾರವಾಗುತ್ತದೆ. ಹೇಗೆ, ಯಾವ ರೀತಿ ಬದುಕಬೇಕೆನ್ನುವುದು ನಮ್ಮ ಆಸೆಗೆ, ಅವಕಾಶಕ್ಕೆ, ಆಲೋಚನೆಗೆ ಬಿಟ್ಟಿದ್ದು. ಒಳಿತಿ ನಿಂದ ಒಳಿತು, ಕೆಡುಕಿನಿಂದ ಕೆಡುಕು. ಆಯ್ಕೆ ನಮ್ಮದು, ಉಳಿದಿದ್ದು ವಿಧಿಲಿಖಿತ..

ಕಾಣದಿಹ ಕೈಯೊಂದು ಸೂತ್ರ ಹಿಡಿದಿದೆ

ಆಡಿಸಿದೆ, ಕಾಡಿಸಿದೆ, ಅಳಿಸಿ ನಗುತಿದೆ. (ಚಿ.ಉದಯಶಂಕರ್)

Courtesy whatsapp msg

No comments:

Post a Comment

ಗೆಲುವು ಸೋಲಾಗಬಾರದು.

"ಗೆಲುವೇ ಸೋಲಾಗಬಾರದು; ಮಕ್ಕಳು ಸೋಲಲಿ ಬಿಡಿ" ತಂದೆ ತಾಯಂದಿರ ಯೋಚನಾ ಕ್ರಮವೇ ಮಕ್ಕಳ ಅಭಿರುಚಿ, ಆಸಕ್ತಿಯನ್ನು ರೂಪಿಸುತ್ತದೆ. ಮುಂದೆ ಅವರ ಭವಿಷ್ಯವನ್ನು ...