Tuesday, 7 January 2020

ಸಹನಂ ಅಮೃತಂ ಫಲಂ

*ಸಹನಂ ಅಮೃತಂ ಫಲಂ*

ಇಂದು ನಮ್ಮೆಲ್ಲರಿಗೂ ಬೇಕಿರುವುದು ತಕ್ಷಣದ ಸಂತೋಷ. ತುರ್ತು ಜನಪ್ರಿಯತೆ, ಅರ್ಜೆಂಟ್ ಶ್ರೀಮಂತಿಕೆ. ಹೇಳಿಕೇಳಿ ಇದು ಇನ್​ಸ್ಟಂಟ್ ಯುಗ. ಹಾಗಾಗಿ ಎಲ್ಲವೂ ನಮಗೀಗ ಸುಲಭವಾಗಿ ದಕ್ಕಬೇಕು, ಬೇಗನೆ ಸಿಗಬೇಕು. ಒಂದು ಯೂಟ್ಯೂಬ್ ವೀಡಿಯೋ ಶುರುವಾಗಲು ಹತ್ತು ಸೆಕೆಂಡುಗಳಿಗಿಂತ ಜಾಸ್ತಿ ತೆಗೆದುಕೊಂಡರೆ ನೋಡುವ ತಾಳ್ಮೆ ಇಲ್ಲದೇ ಮುಂದಿನ ವೀಡಿಯೋ ಸ್ಕ್ರೋಲ್ ಮಾಡುವ ನಮಗೆ, ಟ್ರಾಫಿಕ್​ನಲ್ಲಿ ಹಸಿರುದೀಪ ಹತ್ತಿದಾಗ ಮುಂದಿನವರು ವಾಹನ ಚಲಾಯಿಸಲು ಇಪ್ಪತ್ತು ಸೆಕೆಂಡ್ ತಡಮಾಡಿದರೆ ಕೆಳತುಟಿಯನ್ನು ಹಲ್ಲಿಂದ ಕಚ್ಚಿಹಿಡಿದು ಮುಖ ಸಿಂಡರಿಸುವ ನಮಗೆ, ಮನೆಯಲ್ಲಿ ನೀರು ಕೇಳಿದಾಗ ತರಲು ಮೂವತ್ತು ಸೆಕೆಂಡ್ ತಡವಾದರೆ ಅಸಹನೆಯಿಂದ ಕುದಿಯುವ ನಮಗೆ ತಾಳ್ಮೆ ಎಂಬುದು ಮರೀಚಿಕೆಯಾಗಿಬಿಟ್ಟಿದೆ. ಮತ್ತು ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ತಾಳ್ಮೆರಹಿತ ಮನಸ್ಥಿತಿ ಹೊಂದಿದವರಾಗಿದ್ದಾರೆ. ಪರಿಣಾಮ ಗುರಿಸಾಧನೆಗಾಗಿ ದೀರ್ಘಾವಧಿಯ ಕಾಲ ಶ್ರಮ ಪಡುವ ಮನಸ್ಥಿತಿ ಮಾಯವಾಗುತ್ತಿದೆ. ಕಾರಣವಿಷ್ಟೇ ಜನರು ದೀರ್ಘಕಾಲದ ಲಾಭಕ್ಕಿಂತ ತಕ್ಷಣದ ಸಂತಸವನ್ನು ಆಶಿಸುತ್ತಾರೆ.


ಕ್ಷಣಿಕ ಆಮಿಷಗಳಿಗೆ ಬಲಿ ಬೀಳದವರು ಅದ್ಭುತಗಳನ್ನು ಸಾಧಿಸುತ್ತಾರೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ. ಇದನ್ನು ‘ಡಿಲೇಯ್್ಡ ಗ್ರಾಟಿಫಿಕೇಶನ್’ ಎನ್ನುತ್ತಾರೆ. ಅಂದರೆ ಕನ್ನಡದಲ್ಲಿ ‘ಮುಂದೂಡಲ್ಪಟ್ಟ ಸಂತೃಪ್ತಿ’ ಎನ್ನಬಹುದೇನೋ. ಅಮೆರಿಕದಲ್ಲಿ ಇದನ್ನು ಸಾಬೀತುಪಡಿಸಲು ಒಂದು ಪ್ರಯೋಗ ಮಾಡಲಾಯಿತು. ಸ್ಟಾನ್​ಫೋರ್ಡ್ ವಿಶ್ವವಿದ್ಯಾಲಯದ ವಾಲ್ಟರ್ ಮಿಶೆಲ್ ಎಂಬ ಮನಃಶಾಸ್ತ್ರಜ್ಞರ ನೇತೃತ್ವದ ತಂಡ 1960ರ ದಶಕದಲ್ಲಿ ಒಂದು ಪ್ರಯೋಗ ಮಾಡಿತು. ನಾಲ್ಕೋ ಐದೋ ವರ್ಷದ ಒಂದು ಮಗುವನ್ನು ಕೋಣೆಯಲ್ಲಿ ಕೂರಿಸಿ ಅದರ ಕೈಗೆ ಒಂದು ಮಾರ್ಶ್​ವುಲ್ಲೋ(ಕ್ಯಾಂಡಿ ತರಹದ ಸಿಹಿ ತಿನಿಸು) ಕೊಡುವುದು. ಕೊಟ್ಟು ಆ ಮಗುವಿಗೆ ಎರಡು ಆಯ್ಕೆ ಕೊಡುವುದು. ಮೊದಲನೆಯದು ಆ ಮಗು ತಕ್ಷಣ ಅದನ್ನು ತಿನ್ನಬಹುದು. ಎರಡನೆಯದು ಒಂದಿಷ್ಟು ಸಮಯ ನಿಗದಿಗೊಳಿಸಿ (ಹೆಚ್ಚೆಂದರೆ ಹದಿನೈದು ನಿಮಿಷ), ಆ ಸಮಯದವರೆಗೆ ಸಿಹಿಯನ್ನು ತಿನ್ನದೇ ಕಾದರೆ ಗಿಫ್ಟ್ ಕೊಡುತ್ತೇನೆಂದು ಹೇಳುವುದು. ಆ ಗಿಫ್ಟ್ ಇನ್ನೊಂದು ಸಿಹಿತಿಂಡಿಯೋ, ಕುಕೀ ಏನಾದರೂ ಆಗಿರಬಹುದು. ಆ ಮಗುವನ್ನು ಕೋಣೆಯಲ್ಲಿ ಬಿಟ್ಟು ಹೊರಬರಲಾಗುತ್ತಿತ್ತು. ಬಾಯಲ್ಲಿ ನೀರೂರಿಸುವ ಸಿಹಿ ಕೈಯಲ್ಲಿ, ಮೇಲಾಗಿ ನೋಡುವವರು ಯಾರೂ ಇಲ್ಲ! ಚಿಕ್ಕ ಮಕ್ಕಳು ಬಹಳ ಜನ ಪಟಕ್ಕನೆ ಬಾಯಲ್ಲಿ ಹಾಕಿಕೊಳ್ಳುತ್ತಿದ್ದರು, ಇನ್ನು ಕೆಲವರು ಎರಡು ಮೂರು ನಿಮಿಷ ಕಾದು ತಡೆಯಲಾರದೆ ತಿಂದು ಬಿಡುತ್ತಿದ್ದರು. ಮತ್ತೂ ಕೆಲವು ಮಕ್ಕಳು ಆರೇಳು ನಿಮಿಷ ಕಾಯುತ್ತಿದ್ದರು. ಆದರೆ ಕೆಲ ದೃಢಮನಸ್ಸಿನ ಪೋರಪೋರಿಯರು ಮನಸ್ಸನ್ನು ನಿಗ್ರಹಿಸಿ ಬಹುಮಾನ ಗೆದ್ದೇಬಿಟ್ಟರು. ಈ ಪ್ರಯೋಗಕ್ಕೆ ಒಳಪಟ್ಟ ಎಲ್ಲ ಮಕ್ಕಳ ಮಾಹಿತಿಯನ್ನೂ ಸತತವಾಗಿ ಅವರು ದೊಡ್ಡವರಾದ ಮೇಲೂ ಪಡೆಯಲಾಯಿತು. ಅಧ್ಯಯನದ ಪ್ರಕಾರ ಯಾರು ಹೇಳಿದಷ್ಟು ಸಮಯ ಕಾದು ಬಹುಮಾನ ಗಿಟ್ಟಿಸಿಕೊಂಡರೋ ಆ ಮಕ್ಕಳು ಮುಂದೆ ಅತ್ಯುತ್ತಮ ಶಿಕ್ಷಣ ಪಡೆದರು, ಉತ್ತಮ ಉದ್ಯೋಗ ಗಿಟ್ಟಿಸಿದರು, ಜೀವನದಲ್ಲಿ ಯಶಸ್ಸು ಕಂಡರು. ಅವರ ಆರೋಗ್ಯ ಚೆನ್ನಾಗಿತ್ತು, ವೈಯಕ್ತಿಕ ಸಂಬಂಧಗಳು ಚೆನ್ನಾಗಿದ್ದವು. ಈ ಪ್ರಯೋಗಕ್ಕೆ ವಿಭಿನ್ನ ಹಿನ್ನೆಲೆಯ ಮಕ್ಕಳನ್ನು ಆಯ್ದುಕೊಳ್ಳಲಾಗಿತ್ತು. ಮಕ್ಕಳ ಆರ್ಥಿಕ ಹಿನ್ನೆಲೆಗಿಂತ ಅವರ ವಿಲ್​ಪವರ್ ಅತ್ಯುತ್ತಮ ಫಲಿತಾಂಶಕ್ಕೆ ಕಾರಣವಾಗುತ್ತದೆಂಬ ತೀರ್ಮಾನಕ್ಕೆ ಬರಲಾಯಿತು.

ಈ ರೀತಿಯ ಪ್ರಯೋಗಗಳ ಫಲಿತಾಂಶ ಹೀಗೇ ಎಂದು ಹೇಳಲಾಗುವುದಿಲ್ಲ ಬಿಡಿ, ಎಲ್ಲದಕ್ಕೂ ಅಪವಾದ ಇದ್ದೇ ಇರುತ್ತದೆ. ಆದರೆ ಒಂದಂತೂ ನಿಜ ಯಾರು ಕ್ಷಣಿಕ ಖುಶಿಯನ್ನು ಅಂದರೆ ಈಗಿನ ಯುವಜನರ ಭಾಷೆಯಲ್ಲಿ ‘ಎಂಜಾಯ್’ ಮಾಡುವುದನ್ನು ಮುಂದೂಡುತ್ತಾರೋ ಅವರು ಬದುಕಿನಲ್ಲಿ ಯಶಸ್ವಿಯಾಗುವುದಂತೂ ಖಂಡಿತ. ಈ ರೀತಿಯ ತತಕ್ಷಣದ ಸಂತೋಷದಿಂದ ತೃಪ್ತಿ ಪಡೆಯುವುದನ್ನು ‘ಇನಸ್ಟಂಟ್ ಗ್ರಾಟಿಫಿಕೇಷನ್’ ಎನ್ನುತ್ತಾರೆ. ಚಿಕ್ಕವರ ಮೇಲೆ ಪ್ರಯೋಗ ಮಾಡಿದಂತೆ ದೊಡ್ಡವರ ಮೇಲೂ ಪ್ರಯೋಗ ಮಾಡಲಾಯಿತು. ಮುಂದಿನವಾರ ಪೂರ್ತಿ ನಿಮಗೆ ಉಚಿತವಾಗಿ ಸೇಬು ಅಥವಾ ಚಾಕಲೇಟ್ ಕೊಡಲಾಗುವುದೆಂದು ಹೇಳಿದಾಗ ಹತ್ತಕ್ಕೆ ಆರು ಜನ ಸೇಬನ್ನೂ, ನಾಲ್ಕು ಜನ ಚಾಕಲೇಟ್ ಅನ್ನೂ ಆಯ್ದುಕೊಂಡರು. ಆದರೆ ತಕ್ಷಣ ತಿನ್ನಲು ಕೊಡುತ್ತೇವೆ ಎಂದಾಗ ಇಬ್ಬರು ಮಾತ್ರ ಸೇಬು ಆಯ್ಕೆ ಮಾಡಿಕೊಂಡರೆ ಉಳಿದ ಎಂಟು ಜನ ಚಾಕಲೇಟ್ ಆಯ್ದುಕೊಂಡರು. ಅಂದರೆ ಮುಂದಿನ ವಾರದ ಆಯ್ಕೆ ಮಾಡುವಾಗ ಬಹಳಜನ ಆರೋಗ್ಯಕರ ಆಯ್ಕೆಯನ್ನೇ ಮಾಡಿದರು. ಆದರೆ ತಕ್ಷಣದ ಆಯ್ಕೆಯಾಗಿ ಚಾಕಲೇಟಿಗೆ ಶರಣಾದರು. ಚಾಕಲೇಟ್ ತಿನ್ನುವ ತುಡಿತವನ್ನು ನಿಯಂತ್ರಿಸಲು ಎಂಬತ್ತು ಪ್ರತಿಶತ ಜನರಿಗೆ ಆಗಲಿಲ್ಲ. ಇದರರ್ಥ ದೂರದ ಆಯ್ಕೆ ಮಾಡುವಾಗ ನಾವು ಒಳ್ಳೆಯ ಆಯ್ಕೆಯನ್ನೇ ಮಾಡುತ್ತೇವೆ. ಉದಾಹರಣೆಗೆ ಓದುವ ಟೈಂ ಟೇಬಲ್ ಹಾಕಿಕೊಳ್ಳುವಾಗ ಅದು ಹತ್ತು ಹನ್ನೆರಡು ಗಂಟೆಯದ್ದು. ಅದನ್ನು ಪಾಲಿಸುವಾಗ ಎರಡು ಗಂಟೆ ಕೂರುವುದೂ ಕಷ್ಟ. ಬಹಳ ಜನರ ವಾಕಿಂಗ್​ಪ್ಲಾನ್ ಕೂಡ ಇದೇ ಥರ. ವಾರದಲ್ಲಿ ಐದು ದಿನದ ಯೋಜನೆ ಕೊನೆಗೆ ತಿಂಗಳಿಗೊಮ್ಮೆಯೂ ಜಾರಿಗೆ ಬರುವುದಿಲ್ಲ. ಇನ್ನು ಮಹಾನಗರಗಳಲ್ಲಿ ಜಿಮ್‌.. ತಿಂಗಳ ಹಣ ಕಟ್ಟಿ ವ್ಯರ್ಥ ಮಾಡುವವರೇ ಬಹಳ. ಇದರಲ್ಲಿ ಮೊಬೈಲ್ ಗೇಮ್ ಆಡುವುದು, ಫೇಸ್​ಬುಕ್​ನಲ್ಲೇ ಮುಳುಗಿರುವುದು, ಅತಿಯಾಗಿ ಸಿನಿಮಾ ನೋಡುವುದು, ಪದೇಪದೆ ಪಾರ್ಟಿ ಮಾಡುವುದು, ಕಣ್ಣಿಗೆ ಬಿದ್ದ ಹೊಸವಿನ್ಯಾಸದ ಬಟ್ಟೆಯನ್ನೆಲ್ಲ ಖರೀದಿಸುವುದು, ಕುಡಿತ, ದುರಭ್ಯಾಸಗಳು… ಹೀಗೆ ಆ ಕ್ಷಣಕ್ಕೆ ಸಂತೋಷ ಕೊಡುವಂತಹ ಎಲ್ಲ ಸಂಗತಿಗಳೂ ಬರುತ್ತವೆ. ಬದುಕೆಂದರೆ ಇವೇ ಎಂಬುದು ಬಹಳ ಜನರ ಅಭಿಪ್ರಾಯ. ಜೀವನ ಇಷ್ಟಕ್ಕೆ ಸೀಮಿತವಾಗಿಲ್ಲ ಎಂಬ ಬೇಸಿಕ್ ವಿಚಾರವೇ ಬಹಳ ಮಂದಿಗೆ ಅರ್ಥವಾಗುತ್ತಿಲ್ಲ.

ನಮ್ಮ ಯುವಜನರ ಬಹುದೊಡ್ಡ ಸಮಸ್ಯೆ ಅವರಿಗೆ ಬದುಕಿನ ಎಲ್ಲ ಸಂತಸಗಳೂ ಬೇಕು. ಆದರೆ ಸಮಸ್ಯೆಯೇನೆಂದರೆ ಅದಕ್ಕಾಗಿ ತಾಳ್ಮೆಯಿಂದ ಕಾಯುವಷ್ಟು, ಗುರಿಸಾಧನೆಗಾಗಿ ಕಷ್ಟಪಡುವಷ್ಟು ವ್ಯವಧಾನವಿರುವವರು ಕಡಿಮೆ. ಕಷ್ಟಪಟ್ಟಷ್ಟೂ ಸಾಧನೆಗೆ ಮತ್ತಷ್ಟು ಮೆರುಗು. ಹೊಟ್ಟೆ ತುಂಬಿದಾಗ ತಿಂದರೆ ಮೃಷ್ಟಾನ್ನವೂ ರುಚಿಸದು. ಆದರೆ ಹಸಿವಾದರೆ ಊಟದ ಮಜವೇ ಬೇರೆ. ಅದೇ ರೀತಿ ಹಗಲಿರುಳು ಕಷ್ಟಪಟ್ಟು ಯಶಸ್ಸಿನ ಮೆಟ್ಟಿಲೇರಿದರೆ ಸಿಗುವ ಆನಂದ ಅಪರೂಪದ್ದು. ಯಶಸ್ಸಿಗಾಗಿ ಶಾರ್ಟ್​ಕಟ್​ಗಳನ್ನು ಹುಡುಕುವುದು ಮೂರ್ಖತನ. ಕೈ ಕೆಸರಾಗದೇ ಬಾಯಿ ಮೊಸರಾಗುವುದು ಕನಸಿನಲ್ಲಿ ಮಾತ್ರ ಸಾಧ್ಯ.

ವಿಲ್​ಪವರ್ ಅಥವಾ ಮನೋಬಲ ಎಂಬುದು ಯಶಸ್ಸಿಗೆ ಬೇಕೇ ಬೇಕಾದ ಸಂಗತಿ. ಬಹಳ ಮಂದಿ ತಮ್ಮ ಮೂಡ್​ಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಾರೆ. ಖುಶಿಯಾದಾಗ ಒಂದು ಗಂಟೆ ಜಾಸ್ತಿ ಓದುವುದು, ಬೇಜಾರಾದಾಗ ಮೂರು ದಿನ ಪುಸ್ತಕ ಮುಟ್ಟದಿರುವುದು ಸಾಮಾನ್ಯ. ಆದರೆ ತಕ್ಷಣದ ಖುಶಿಗಳಿಗೆ ಆಸೆಪಡದೆ ಆಕಾಶ ಕಳಚಿ ಬಿದ್ದರೂ ತನ್ನ ಕೆಲಸ ತಾನು ಮಾಡಿಕೊಂಡು ಹೋಗುವವರನ್ನು ನೋಡುತ್ತೇವೆ. ಇಂಥವರೇ ಸಾಧಕರಾಗುತ್ತಾರೆ, ವಿಶಿಷ್ಟವಾದುದನ್ನು ಸಾಧಿಸುತ್ತಾರೆ. ಹೊರಗಿನ ಸಂಗತಿಗಳು ನಮ್ಮ ದೈನಂದಿನ ಕಾರ್ಯವನ್ನು ಪ್ರಭಾವಿತಗೊಳಿಸದಂತೆ ಕಾದುಕೊಳ್ಳುವುದು ವಿಲ್​ಪವರ್. ಆದರೆ ಈ ಮನೋಬಲವನ್ನು ಬೆಳೆಸಿಕೊಳ್ಳುವುದು ಅಷ್ಟು ಸುಲಭವಲ್ಲ. ಮರ್ಕಟ ಮನಸ್ಸನ್ನು ಹಿಡಿದಿಡುವ ಕಲೆಯನ್ನು ಕಷ್ಟಪಟ್ಟೇ ಬೆಳೆಸಿಕೊಳ್ಳಬೇಕು. ಬೆಳಗ್ಗೆ ಹತ್ತು ನಿಮಿಷ ಒಂದೆಡೆ ಕಣ್ಮುಚ್ಚಿ ಕುಳಿತು ದೀರ್ಘ ಉಸಿರಾಟ ನಡೆಸುವುದು ಸಹಕಾರಿ. ಸಣ್ಣ ಸಣ್ಣ ಗುರಿಗಳನ್ನು ಹಾಕಿಕೊಂಡು ಅದನ್ನು ಸಾಧಿಸಲು ಪ್ರಯತ್ನಿಸಬೇಕು. ಉದಾಹರಣೆಗೆ ಒಂದು ಪಾಠ ಓದಿ ಆಗುವವರೆಗೆ ತಿಂಡಿ ತಿನ್ನುವುದಿಲ್ಲ ಎಂದುಕೊಳ್ಳುವುದು, ಒಂದು ದಿನ ಟಿವಿ ನೋಡದೇ ಇರುವುದು, ಒಂದು ಚೂರೂ ಮನಸ್ಸಿಲ್ಲದಿದ್ದರೂ ಕೋಣೆಯನ್ನು ಶುಚಿಗೊಳಿಸುವುದು, ಮಧ್ಯಾಹ್ನವಿಡೀ ಮಲಗಬೇಕು ಎನ್ನಿಸಿದಾಗಲೇ ಬಟ್ಟೆ ತೊಳೆಯುವುದನ್ನೋ, ಇಸ್ತ್ರಿ ಮಾಡುವುದನ್ನೋ ಮಾಡುವುದು ಹೀಗೆ ನಮಗೆ ಇಷ್ಟವಿಲ್ಲದ ಆದರೆ ಅಗತ್ಯವಾದ ಚಿಕ್ಕಪುಟ್ಟ ಕೆಲಸಗಳನ್ನು ಮಾಡುತ್ತ ಹೋದರೆ ಮನೋಬಲ ವೃದ್ಧಿಸುತ್ತದೆ.

ಕನಸು ಕಾಣುವುದು, ಯೋಜನೆಗಳನ್ನು ಹಾಕಿಕೊಳ್ಳುವುದು ಸುಲಭ. ಆದರೆ ತಕ್ಷಣದ ಸಂತಸ ಪಡೆಯುವ ಹಂಬಲವನ್ನು ಮೀರಿನಿಂತು ಕ್ರಿಯಾಶೀಲರಾಗುವವರಿಗೆ ಮಾತ್ರ ಯಶಸ್ಸು ಲಭಿಸುವುದು. ಇದು ಸಾರ್ವಕಾಲಿಕ ಸತ್ಯ..

Courtesy.. whatsapp msg

No comments:

Post a Comment

ಗೆಲುವು ಸೋಲಾಗಬಾರದು.

"ಗೆಲುವೇ ಸೋಲಾಗಬಾರದು; ಮಕ್ಕಳು ಸೋಲಲಿ ಬಿಡಿ" ತಂದೆ ತಾಯಂದಿರ ಯೋಚನಾ ಕ್ರಮವೇ ಮಕ್ಕಳ ಅಭಿರುಚಿ, ಆಸಕ್ತಿಯನ್ನು ರೂಪಿಸುತ್ತದೆ. ಮುಂದೆ ಅವರ ಭವಿಷ್ಯವನ್ನು ...